April 18, 2026
IMG-20260407-WA0020

ಕೊಪ್ಪಳ : ಬೀದ‌ರ್ ಜಿಲ್ಲೆಯ ಬಸವಕಲ್ಯಾಣದ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ ಇರುವ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುವಂತೆ ಆಗ್ರಹಿಸಿ ಕೊಪ್ಪಳ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಬೀದರ್ ಜಿಲ್ಲೆಯ ಬಸವ ಕಲ್ಯಾಣದಲ್ಲಿರುವ ಅನುಭವ ಮಂಟಪದ ತ್ರಿಪುರಾಂತಕ ಕೆರೆ ಹತ್ತಿರ 12ನೇ ಶತಮಾನದ ಅನೇಕ ಬಸವಾದಿ ಶರಣರ ಅರಿವಿನ ಗವಿಗಳು ಇರುವುದಾಗಿ ಇತಿಹಾಸ ಸಾರುತ್ತದೆ. ಅದೇ ರೀತಿ ವಿಶ್ವಗುರು, ಸಾಂಸ್ಕೃತಿಕ ನಾಯಕ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯೂ ಅಲ್ಲಿ ಅಸ್ತಿತ್ವದಲ್ಲಿದೆ. ಆದರೆ, ಶಿವಶರಣ ಹಡಪದ ಅಪ್ಪಣ್ಣನವರ ಅರಿವಿನ ಗವಿಯನ್ನು ಬಸವೇಶ್ವರ ದೇವಸ್ಥಾನದ ಪಂಚಕಮಿಟಿಯವರು ಅಕ್ರಮವಾಗಿ ಹಸ್ತಕ್ಷೇಪ ಮಾಡಿ, ಅನ್ಯ ಶರಣರ ಮೂರ್ತಿ ಪ್ರತಿಷ್ಠಾಪನೆ ಮಾಡಿರುವುದು ಗಮನಾರ್ಹ ಸಂಗತಿ. ಇದರಿಂದ ಶಿವಶರಣ ಹಡಪದ ಅಪ್ಪಣ್ಣನವರಿಗೆ ಮತ್ತು ನಮ್ಮ ಸಮುದಾಯದ ಭಕ್ತಿಭಾವನೆಗಳಿಗೆ ತೀವ್ರ ಅನ್ಯಾಯವಾಗಿದ್ದು, ನಮ್ಮ ಇತಿಹಾಸದ ಮೌಲ್ಯ ಕುಗ್ಗುವಂತಾಗಿದೆ.
ಹಡಪದ ಅಪ್ಪಣ್ಣನವರ ವಂಶಸ್ಥರು ಮತ್ತು ಸಮಾಜದ ಭಕ್ತರಾದ ನಾವು, ನಮ್ಮ ಶರಣರ ಇತಿಹಾಸ ಹಾಗೂ ಅರಿವಿನ ಗವಿಯನ್ನು ಕಳೆದುಕೊಳ್ಳುವ ಪ್ರಶ್ನೆಯೇ ಇಲ್ಲ. ಈ ಘಟನೆ ನಮ್ಮ ಭಾವನೆಗಳಿಗೆ ಗಂಭೀರ ಧಕ್ಕೆ ಉಂಟುಮಾಡಿದೆ.
ಈ ಸಂಬಂಧವಾಗಿ, ಈಗಾಗಲೇ ಸಮಾಜದ ಮುಖಂಡರು, ಭಕ್ತರು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಪ್ರತಿಭಟನೆಗಳನ್ನು ಕೂಡ ನಡೆಸಲಾಗಿದೆ. ಅನೇಕ ಮಠಾಧೀಶರು ಹಾಗೂ ನಾಯಕರು ಸಹ ಹಡಪದ ಅಪ್ಪಣ್ಣನವರ ಪರವಾಗಿ ಹೋರಾಟ ನಡೆಸಿದರೂ, ಇನ್ನೂ ನ್ಯಾಯ ದೊರಕಿಲ್ಲ. ಆದುದರಿಂದ, ತಾವು ದಯವಿಟ್ಟು ಈ ಅಕ್ರಮ ಕೃತ್ಯದಲ್ಲಿ ಭಾಗಿಯಾದ ಪಂಚಕಮಿಟಿ ಮತ್ತು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತಕ್ಷಣ ಕ್ರಮ ಕೈಗೊಂಡು, ಯಥಾಸ್ಥಿತಿಗೆ ತರಬೇಕು ಹಾಗೆಯೇ ಹಡಪದ ಅಪ್ಪಣ್ಣನವರ ಅರಿವಿನ ಗವಿಯಲ್ಲಿ ಅವರ ಮೂರ್ತಿಯನ್ನು ಪುನಃ ಪ್ರತಿಷ್ಠಾಪನೆ ಮಾಡಿ, ಆ ಸ್ಥಳವನ್ನು ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿಸಿ ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಈ ಮೂಲಕ ಸಮಸ್ತ ಸಮಾಜದ ಪರವಾಗಿ ವಿನಂತಿಸಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯನ್ನು ನೇತೃತ್ವವನ್ನು ಕೊಪ್ಪಳ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ್ ಹಂದ್ರಾಳ, ಜಿಲ್ಲಾಧ್ಯಕ್ಷ ಶಿವಕುಮಾರ್ ಹಡಪದ, ಜಿಲ್ಲಾ ಉಪಾಧ್ಯಕ್ಷ ಬಸವರಾಜ್ ಇಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಮಾದಿನೂರು, ಮೌನೇಶ ಹಡಪದ, ಫಕೀರೇಶ ಹಡಪದ, ಶರಣಪ್ಪ ಇಟಗಿ, ಫಕೀರಜ್ಜ ಹಂದ್ರಾಳ, ನಿಂಗಪ್ಪ ಹಂದ್ರಾಳ, ಗಣೇಶ ಹಂಚಿನಾಳ್ ಮುತ್ತಣ್ಣ ಬೆಣಕಲ್, ಸುರೇಶ್ ಮ್ಯಾಗೇರಿ, ರಮೇಶ್ ಹಡಪದ, ಗವಿಸಿದ್ದಪ್ಪ ಗುಡ್ದದಳ್ಳಿ, ಚಂದ್ರಪ್ಪ ಹೊಸಳ್ಳಿ, ಮಂಜುನಾಥ ಬೇಳೂರು ಜಿಲ್ಲಾ ಪ್ರತಿನಿಧಿಗಳು, ದ್ಯಾಮಣ್ಣ ಮಾದನೂರು, ಸುಂಕಪ್ಪ ಅಮರಾಪುರ, ರಾಜೇಶ್ ಶಶಿಮಠ, ಈರಣ್ಣ ಕೊರ್ಲಹಳ್ಳಿ, ನಿಂಗಪ್ಪ ಬಿಸನಹಳ್ಳಿ, ವಿರುಪಾಕ್ಷಿ ಮ್ಯಾಗೇರಿ, ಚಂದ್ರು ಮಾದಿನೂರ, ನಾಗರಾಜ ನರೇಗಲ್,ಸೇರಿದಂತೆ ಸಮಾಜದ ಮುಖಂಡರು ಪದಾಧಿಕಾರಿಗಳು ವಹಿಸಿದ್ದರು.

Leave a Reply

Your email address will not be published. Required fields are marked *