
ಕೊಪ್ಪಳ : ಇಂದು ಸಮಾಜವನ್ನು ಸುಸ್ಥಿರವಾಗಿ ಕೊಂಡೊಯ್ಯಲು ಉತ್ತಮ ಪರಿಸರ ಅವಶ್ಯವಾಗಿದ್ದು ಪ್ರತಿಯೊಬ್ಬರು ಗಿಡ, ಮರಗಳನ್ನು ಬೆಳಸಿ ಸಂರಕ್ಷಿಸುವ ಮೂಲಕ ಪರಿಸರ ಜಾಗೃತಿಗೆ ಮುಂದಾಗಬೇಕು ಎಂದು ಕೊಪ್ಪಳ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಶ್ರೀಶೈಲ್ ಬಿರಾದಾರ ಹೇಳಿದರು.
ಅವರು ಮಂಗಳವಾರದಂದು ನಗರದ ನ್ಯೂ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ನಲ್ಲಿ ಭಾರತ ಸ್ಕೌಟ್ಸ್ ಗೈಡ್ಸ್ ಹಾಗೂ ನ್ಯೂ ಎಕ್ಸಲೆಂಟ್ ಪಬ್ಲಿಕ್ ಸ್ಕೂಲ್ ನ ಸಹಯೋಗದೊಂದಿಗೆ ಹಾಲವರ್ತಿ ಎಮ್ ಎಸ್ ಪಿ ಎಲ್ ಕಾರ್ಖಾನೆಯಿಂದ ಹಮ್ಮಿಕೊಂಡ “ವಿಶ್ವಪರಿಸರ ದಿನಾಚರಣೆ ” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಸಿ ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಿ ಮಾತನಾಡಿದರು.
ಪ್ರತಿಯೊಬ್ಬ ಮನುಷ್ಯನ ಉಸಿರಾಟಕ್ಕೆ ಆಮ್ಲಜನಕ ಅವಶ್ಯಕತೆ ಇದ್ದು ಅದು ಪರಿಸರದಿಂದ ದೊರೆಯುತ್ತಿದ್ದು ಪರಿಸರ ವಿನಾಶವಾದರೇ ಹಣ ಕೊಟ್ಟು ಆಮ್ಲಜನಕ ಪಡೆಯುವ ಸನ್ನಿವೇಶ ಎದುರಾಗಲಿದೆ. ಆದ್ದರಿಂದ ವಿಶೇಷ ದಿನಗಳಂದು ಹಣ ದುಂದುವೆಚ್ಚ ಮಾಡದೇ ಪರಿಸರ ಬೆಳೆಸಲು ಹಣ ವಿನಿಯೋಗಿಸಿ ಕೋಟಿ ಜೀವರಾಶಿ ಬದುಕಲು ಅವಕಾಶ ಕಲ್ಪಿಸುವ ಪಣ ತೋಡಬೇಕು ಎಂದು ಅವರು ಕರೆ ನೀಡಿದರು.
ನಂತರ ನಗರಸಭೆ ಸದಸ್ಯ ಹಾಗೂ ಶ್ರೀ ಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ್ ಗೌಡ ಆಡೂರ ಮಾತನಾಡಿ ಎಮ್ ಎಸ್ ಪಿ ಎಲ್ ಕಾರ್ಖಾನೆಯವರು ಕೇವಲ ಪರಿಸರ ದಿನಾಚರಣೆಯಲ್ಲಿ ಮಾತ್ರ ಪರಿಸರದ ಬಗ್ಗೆ ಮಾತನಾಡದೇ ನಗರದಲ್ಲಿ ಹಸಿರುಕರಣಕ್ಕೆ ಯಾವಾಗಲೂ ಪ್ರಾಶಸ್ತ್ಯ ನೀಡುತ್ತಾ ಬಂದಿದ್ದು, ಸುತ್ತ ಮುತ್ತಲಿನ ಗ್ರಾಮಗಳ ಶಾಲೆಗಳಲ್ಲಿ ಗ್ರಾಮಗಳಲ್ಲಿ ಪರಿಸರದ ಬಗ್ಗೆ ಕಾಳಜಿವಹಿಸಿ ಹಸಿರುಕರಣ ಮಾಡಿದ್ದಾರೆ, ತಮ್ಮ ಕಾರ್ಖಾನೆ ಉದ್ಯೋಗಿಗಳಿಗಲ್ಲದೇ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಆಗಾಗ ಉಚಿತ ಆರೋಗ್ಯ ಶಿಬಿರ, ಸರಕಾರಿ ಶಾಲೆಗಳಿಗೆ ರಸ್ತೆ, ಊಟದ ತಟ್ಟೆ ಇತರೇ ಸಾಮಗ್ರಿಗಳನ್ನು ಕಂಪನಿಯ ಮೂಲಕ ನೀಡಿ ಈ ಭಾಗದ ಜನತೆಗೆ ಸಹಾಯಕ್ಕೆ ನಿಂತಿದ್ದಾರೆ ಎಂದು ಹೇಳಿದರು.
ಎಂಎಸ್ಪಿಎಲ್ ನ ಮುಖ್ಯಸ್ಥ ಮುರುಳಿಧರನ್ ಮಾತನಾಡಿ ನಮ್ಮ ಕಾರ್ಖಾನೆ ವತಿಯಿಂದ ಆರೋಗ್ಯ, ಶಿಕ್ಷಣದ ಅಭಿವೃದ್ಧಿ, ಯುವಕರಿಗೆ ಕೌಶಲ್ಯ ತರಬೇತಿ, ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಸಬಲೀಕರಣ, ಪರಿಸರ ಸುಸ್ಥಿರತೆ, ಕಲೆ ಮತ್ತು ಸಂಸ್ಕೃತಿ, ಗ್ರಾಮೀಣ ಕ್ರೀಡೆಗಳ ಉತ್ತೇಜನ ಮುಂತಾದ ಸಾಮಾಜಿಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲು 23 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು ಉತ್ತೇಜನ ಕೈಗೊಳ್ಳುತ್ತಿದೇವೆ.
ಖಾಸಗಿ ಸಾರ್ವಜನಿಕ ಪಾಲುದಾರಿಕೆಯೊಂದಿಗೆ 10 ಗ್ರಾಮಗಳಲ್ಲಿ 10 ಆರ್ ಓ ಪ್ಲಾಂಟ್ ಗಳನ್ನು 16 ವರ್ಷಗಳಿಂದ ಸಮರ್ಥವಾಗಿ ನಡೆಸುತ್ತಿದ್ದೇವೆ. 20 ಹಳ್ಳಿಗಳಲ್ಲಿ ಒಟ್ಟು 2,100 ಗೃಹ ಶೌಚಾಲಯ 5,000 ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಯಶಸ್ವಿಯಾಗಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಕೋವಿಡ್ ಸಮಯದಲ್ಲಿ, ನಾವು 8,079 ಪಡಿತರ ಕಿಟ್‌ಗಳನ್ನು ವಿತರಿಸಿದ್ದೇವೆ,ಇದಲ್ಲದೇ 4,003 ಕ್ಕೂ ಹೆಚ್ಚು ಜನರು ಕ್ಯಾನ್ಸರ್ ತಪಾಸಣಾ ಶಿಬಿರ, ವಾಕ್ ಮತ್ತು ಶ್ರವಣ ಶಿಬಿರ ಅದರಲ್ಲಿ ಸಾವಿರಕ್ಕೂ ಹೆಚ್ಚು ಜನರಿಗೆ ಶ್ರವಣ ಸಾಧನ, ಕೃತಕ ಕಾಲು ಜೋಡಣೆ ಶಿಬಿರ, ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡಲಾಗಿದೆ,52 ಸರಕಾರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಪ್ರೊಜೆಕ್ಟರ್ ಅಳವಡಿಕೆ, 5ಮಿನಿ ಸೈನ್ಸ್ ಲ್ಯಾಬ್, 823 ಗ್ರಾಮೀಣ ವಿದ್ಯಾರ್ಥಿನಿಯರಿಗೆ ಪದವಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ವಿದ್ಯಾರ್ಥಿವೇತನವನ್ನು ನೀಡಿ ಉತ್ತೇಜಿಸಿದ್ದೇವೆ,ಶಿಕ್ಷಣವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಚಾರಿ ಗ್ರಂಥಾಲಯ ವಾಹನವನ್ನು ನೀಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳ ಕ್ಷೇತ್ರಾ ಶಿಕ್ಷಣಾಧಿಕಾರಿ ಶಂಕ್ರಯ್ಯ, ಶಾಲಾ ಮುಖ್ಯಸ್ಥ ಮಲ್ಲಿಕಾರ್ಜುನ್ ಚೌಕಿಮಠ, ಎಮ್.ಎಸ್.ಪಿ.ಎಲ್ ಸಿಎಸ್ ಫಂಡ್ ಅಧ್ಯಕ್ಷ ಕೆ.ಎಚ್ ರಮೇಶ, ಭಾರತ ಸ್ಕೌಟ್ ಗೈಡ್ಸ್ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಮುಖ್ಯ ಆಯುಕ್ತ ಎಚ್.ಎಮ್. ಸಿದ್ರಾಮಸ್ವಾಮಿ, ಸೇರಿದಂತೆ ಶಾಲಾ ಶಿಕ್ಷಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಇದ್ದರು.
ಮಹಿಳಾ ಸಬಲೀಕರಣ
ಗ್ರಾಮೀಣ ಮಹಿಳೆಯರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಲು, 19 ಗ್ರಾಮಗಳಲ್ಲಿ 167 ಸ್ವಸಹಾಯ ಸಂಘಗಳನ್ನು ನಡೆಸುತ್ತಿದ್ದೇವೆ. ಸ್ವಸಹಾಯ ಸಂಘಗಳು 2,254 ಗ್ರಾಮೀಣ ಕುಟುಂಬಗಳಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಲು ಸಹಾಯ ಮಾಡಿವೆ.
190 ಕುಟುಂಬಗಳನ್ನು ಪಶುಸಂಗೋಪನೆ ಕಾರ್ಯಕ್ರಮದಡಿಯಲ್ಲಿ ಬೆಂಬಲಿಸಿ, ಪ್ರೋತ್ಸಾಹಿಸಲಾಗಿದೆ.
ಸ್ವಸಹಾಯ ಗುಂಪುಗಳಿಗೆ ಬಡ್ಡಿ ರಹಿತ ಸಾಲ (ಅವರ್ತ ನಿಧಿ) ಒದಗಿಸಿ, ಆದಾಯ ಉತ್ಪಾದನಾ ಚಟುವಟಿಕೆಗಳನ್ನು ನಡೆಸಲು ಪ್ರೋತ್ಸಾಹಿಸಲಾಗಿದೆ. ಕೊಪ್ಪಳ ನಗರದಲ್ಲಿ ಕಳೆದ ವರ್ಷ 4,000 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿದ್ದೇವೆ.
LPG ಸಂಪರ್ಕ ಪಡೆಯಲು 1,289 ಕುಟುಂಬಗಳಿಗೆ ಸಹಾಯ ಮಾಡಲಾಗಿದೆ.
ಗ್ರೀನ್ ಕೊಪ್ಪಳ ಕಾರ್ಯಕ್ರಮದಡಿಯಲ್ಲಿ ಸುಮಾರು 1,00,000 ಗಿಡಗಳನ್ನು ನೆಡಲು ಉದ್ದೇಶಿಸಲಾಗಿದೆ.
ಸಾರ್ವಜನಿಕ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದ್ದು ಒಂದರ PDO (ರೂಪುರೇಷ) ಸಿದ್ಧಪಡಿಸಲಾಗಿದೆ.
-ಮುರುಳಿಧರನ್
ಎಮ್ ಎಸ್ ಪಿಎಲ್ ಮುಖ್ಯಸ್ಥ
.