ಪಿಡಬ್ಲ್ಯೂಡಿ ಇಇ ಪಿ.ಹೇಮಂತರಾಜ್ ಸೇವಾ ನಿವೃತ್ತಿ : ಸನ್ಮಾನ
ಕೊಪ್ಪಳ ಜೂನ್ 30: ಸಾರ್ವಜನಿಕ ಸೇವೆಯಲ್ಲಿ ದೀರ್ಘಕಾಲ ಉತ್ತಮವಾಗಿ ಕಾರ್ಯನಿರ್ವಹಿಸಿ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪಿ. ಹೇಮಂತರಾಜ್ ಅವರು ಇಂದು ಅಧಿಕೃತವಾಗಿ ಸೇವಾ ನಿವೃತ್ತಿ ಹೊಂದಿದರು.
ತಮ್ಮ ಸೇವಾ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ, ಗುಣಮಟ್ಟದ ಕಾಮಗಾರಿಗಳಿಗೆ ಆದ್ಯತೆ ಹಾಗೂ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವಲ್ಲಿ ಅವರು ವಿಶೇಷ ಕೊಡುಗೆ ನೀಡಿದ್ದಾರೆ. ಸಹೋದ್ಯೋಗಿಗಳು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಂಡಿದ್ದ ಅವರು, ಪ್ರಾಮಾಣಿಕತೆ, ಶಿಸ್ತು ಮತ್ತು ಕರ್ತವ್ಯನಿಷ್ಠೆಗೆ ಹೆಸರುವಾಸಿಯಾಗಿದ್ದರು.
ಇಲಾಖೆಯ ವಿವಿಧ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಪಿ. ಹೇಮಂತ್ ರಾಜ್ ಅವರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗಣ್ಯರು ಭಾಗವಹಿಸಿ, ಅವರ ಸೇವೆಯನ್ನು ಶ್ಲಾಘಿಸಿ ಗೌರವ ಸಲ್ಲಿಸಿದರು. ನಿವೃತ್ತಿ ಜೀವನ ಸುಖಕರವಾಗಿ, ಆರೋಗ್ಯ ಮತ್ತು ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಸಮಾರಂಭದಲ್ಲಿ ಮಾತನಾಡಿದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಪಿ. ಹೇಮಂತರಾಜ್ ಅವರು, ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದ ಎಲ್ಲಾ ಅಧಿಕಾರಿಗಳು, ಸಹೋದ್ಯೋಗಿಗಳು ಮತ್ತು ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು. ಇಲಾಖೆಯ ಅಭಿವೃದ್ಧಿಗೆ ಎಲ್ಲರೂ ತಂಡವಾಗಿ ನೀಡಿದ ಸಹಕಾರವೇ ತಮ್ಮ ಯಶಸ್ಸಿನ ಮೂಲ ಎಂದು ಅವರು ತಿಳಿಸಿದರು.
ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಯ ಕೊಪ್ಪಳ ವಿಭಾಗದ ಎಇಇ ವೆಂಕಟೇಶ್, ಇಂಜಿನಿಯರ್ ಖಾಜಾ ಹುಸೇನ್, ನಿವೃತ್ತ ಇಇ ಶಿವಶಂಕರ್ , ಇಂಜಿನಿಯರ್ ಪ್ರಭಾಕರ್, ಗುತ್ತಿಗೆದಾರರು ಸೇರಿದಂತೆ ಇಲಾಖೆಯ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
