ಬಲ್ಡೋಟ ಸಮೂಹದ ಎಂಎಸ್‌ಪಿಎಲ್ ಲಿಮಿಟೆಡ್ ವತಿಯಿಂದ : ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಚಾಲನೆ
ಕೊಪ್ಪಳ: ಬಲ್ಡೋಟ ಸಮೂಹದ ಎಂಎಸ್‌ಪಿಎಲ್ ಲಿಮಿಟೆಡ್, ಹಾಲವರ್ತಿ ಹಾಗೂ ಭಗವಾನ್ ಮಹಾವೀರ್ ವಿಕಲಾಂಗ ಸಹಾಯತಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸ್ಥಳೀಯ ಮುಸ್ಲಿಂ ಶಾದಿ ಮಹಲ್‌ನಲ್ಲಿ ಮಂಗಳವಾರ ಉಚಿತ ಕೃತಕ ಕಾಲು ಜೋಡಣೆ ಶಿಬಿರಕ್ಕೆ ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಹಾಯಕ ಆಯುಕ್ತರಾದ ಕ್ಯಾಪ್ಟನ್ ಮಹೇಶ್ ಮಾಲಗತ್ತಿ ಅವರು, ಬಲ್ಡೋಟ ಸಂಸ್ಥೆಯು ಸಮಾಜಮುಖಿ ಕಾರ್ಯಗಳ ಮೂಲಕ ಅಂಗವಿಕಲರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸುತ್ತಿದೆ. ಇಂತಹ ಸೇವಾ ಕಾರ್ಯಕ್ರಮಗಳು ಫಲಾನುಭವಿಗಳಿಗೆ ಸ್ವಾವಲಂಬಿ ಜೀವನ ನಡೆಸಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಹೇಮಂತ್ ಕುಮಾರ್ ಅವರು ಮಾತನಾಡಿ, ಮಾನವೀಯ ಮೌಲ್ಯಗಳ ಆಧಾರದ ಮೇಲೆ ನಡೆಯುತ್ತಿರುವ ಈ ಕಾರ್ಯಕ್ರಮ ನಿಜವಾದ ಫಲಾನುಭವಿಗಳಿಗೆ ತಲುಪುತ್ತಿದ್ದು, ಸಮಾಜದಲ್ಲಿ ಸೇವಾ ಮನೋಭಾವ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ತಿಳಿಸಿದರು. ಈ ಕಾರ್ಯಕ್ಕಾಗಿ ಬಲ್ಡೋಟ ಸಮೂಹವನ್ನು ಅಭಿನಂದಿಸಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವೆಂಕಟೇಶ್ ದೇಶಪಾಂಡೆ ಅವರು ಮಾತನಾಡಿ, ಈ ಭಾಗದ ಅಂಗವಿಕಲರಿಗೆ ಕೃತಕ ಕಾಲು ಅಳವಡಿಕೆ ಶಿಬಿರವು ಅತ್ಯಂತ ಉಪಯುಕ್ತವಾಗಿದ್ದು, ಬಲ್ಡೋಟ ಸಂಸ್ಥೆಯ ಸಾಮಾಜಿಕ ಕಳಕಳಿ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಲ್ಡೋಟ ಸಮೂಹದ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ. ನರೇಂದ್ರಕುಮಾರ್ ಎ. ಬಲ್ಡೋಟ ಅವರು, ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಈ ಶಿಬಿರವನ್ನು ಆಯೋಜಿಸಲಾಗುತ್ತಿದ್ದು, ಈಗಾಗಲೇ 2,900ಕ್ಕೂ ಅಧಿಕ ಜನರಿಗೆ ನೆರವು ನೀಡಲಾಗಿದೆ ಎಂದು ತಿಳಿಸಿದರು. ಸಮಾಜದಲ್ಲಿ ಅವಶ್ಯಕವಿರುವವರ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಎಂಎಸ್‌ಪಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಮೇದಾ ವೆಂಕಟಯ್ಯ, ಪ್ರಭುದೇವಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈಗಾಗಲೇ ಹೆಸರು ನೋಂದಾಯಿಸಿಕೊಂಡಿರುವ 250 ಫಲಾನುಭವಿಗಳ ಪೈಕಿ ಮೊದಲ ದಿನ 100ಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗವಹಿಸಿ ಸೇವೆಯ ಪ್ರಯೋಜನ ಪಡೆದುಕೊಂಡರು.
