ಕೊಪ್ಪಳ : ಶಂಭುಲಿಂಗನಗೌಡ ಪಾಟೀಲ್ ಅವರು ಕಠಿಣ ಪರಿಶ್ರಮದಿಂದ ಬೆಳೆದ ಸಂಘಟನಾ ಚತುರ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ಹೇಳಿದರು.
ಅವರು ನಗರದ ಮಧುಶ್ರೀ ಗಾರ್ಡನ್‌ನಲ್ಲಿ 38 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತಿ ಹೊಂದಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಶಿಕ್ಷಕರ ಮುಖಂಡ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅವರ ವಯೋನಿವೃತ್ತಿ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿ ಶಿಕ್ಷಕರ ಸಂಘಟನೆಯನ್ನು ಬಲಪಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ ಎಸ್ ಷಡಾಕ್ಷರಿ ಅಧಿಕಾರ, ಹುದ್ದೆ ಹಾಗೂ ಅಂತಸ್ತು ಶಾಶ್ವತವಲ್ಲ. ಸಮಾಜದ ವಿಶ್ವಾಸ ಗಳಿಸಿ ಜನಪರ ಕೆಲಸ ಮಾಡಿದರೆ ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ, ಶಿಕ್ಷಕರಲ್ಲಿ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಹಾಗೂ ಜಗಳಗಳಿಗೆ ಅವಕಾಶ ನೀಡಬಾರದು. ಯಾವುದೇ ಸಮಸ್ಯೆ ಬಂದರೂ ಶಿಕ್ಷಕರು ಪರಸ್ಪರ ಚರ್ಚಿಸಿ ಪರಿಹರಿಸಿಕೊಳ್ಳಬೇಕು. ಜಾತಿ, ಧರ್ಮ ಹಾಗೂ ಪಕ್ಷಭೇದಗಳನ್ನು ಬದಿಗಿಟ್ಟು ನೌಕರರಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದಾಗ ಮಾತ್ರ ಸಮಾಜದಲ್ಲಿ ಗೌರವ ದೊರೆಯುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ್ ಮಾತನಾಡಿ, ತಮ್ಮ ವೃತ್ತಿ ಹಾಗೂ ಕುಟುಂಬಕ್ಕೆ ಮಾತ್ರ ಸೀಮಿತರಾಗುತ್ತಾರೆ. ಆದರೆ ಶಂಭುಲಿಂಗನಗೌಡ ಅವರು ವೃತ್ತಿಯ ಜೊತೆಗೆ ಸಂಘಟನಾ ಕ್ಷೇತ್ರದಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಮೆಚ್ಚುಗೆ ಪಡೆದಿದ್ದಾರೆ ಎಂದರು.
ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ್ ಮಾತನಾಡಿ, ಶಂಭುಲಿಂಗನಗೌಡ ಅವರು ಬಹುಮುಖ ವ್ಯಕ್ತಿತ್ವದವರಾಗಿದ್ದಾರೆ. ಎಂದು ಹೇಳಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, 38 ವರ್ಷಗಳ ಕಾಲ ಶಿಕ್ಷಣ ಎಂಬ ಪವಿತ್ರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಶಂಭುಲಿಂಗನಗೌಡ ಅವರ ಕಾರ್ಯ ಶ್ಲಾಘನೀಯ. ನಿವೃತ್ತಿ ಬಳಿಕವೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಂಘಟನೆ ಮತ್ತು ಹೋರಾಟ ಜೀವನದ ಅವಿಭಾಜ್ಯ ಅಂಗಗಳಾಗಿದ್ದು, ಸಮಾಜದ ಒಳಿತಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸಬೇಕು ಹೇಳಿದರು.
ಕಾರ್ಯಕ್ರಮದಲ್ಲಿ ಡಾ. ಬಸವರಾಜ ಕ್ಯಾವಟರ್ ಮಾತನಾಡಿದರು.
ಬಿಸರಳ್ಳಿಯ ಶಿವಶಾಂತ ವೀರ ಮಹಾಸ್ವಾಮಿಗಳು, ಅಳವಂಡಿಯ ಶ್ರೀ ಮರಳಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಮೈನಳ್ಳಿ-ಬಿಕನಳ್ಳಿ ಉಜ್ಜಯಿನಿ ಶಾಖಾ ಮಠದ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಜಿಲ್ಲಾ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಡಾ. ಬಸವರಾಜ ಕ್ಯಾವಟರ್, ಉದ್ಯಮಿ ಬಸವರಾಜ ಪುರದ, ಶಿವಾನಂದ ನಾಯಕ್, ಹನುಮರಡ್ಡಿ .ಹಂಗನಕಟ್ಟಿ, ನೌಕರರ ಸಂಘದ ಗೌರವಾಧ್ಯಕ್ಷ ಮಲ್ಲಿಕಾರ್ಜುನ ಬಳ್ಳಾರಿ, ರಾಜ್ಯ ಉಪಾಧ್ಯಕ್ಷ ನಾಗರಾಜ ಜುಮ್ಮಣ್ಣನವರ್, ರುದ್ರಣ್ಣ, ಮಲ್ಲಿಕಾರ್ಜುನ ಗೌಡ, ಬಸವರಾಜ್ ಭೋವಿ, ವೆಂಕನಗೌಡ ಹಿರೇಗೌಡರ, ಬೀರಪ್ಪ ಅಂಡಗಿ, ರವಿ ಉತ್ತಂಗಿ, ರಮೇಶ ವೈದ್ಯ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಶಂಭುಲಿಂಗನಗೌಡ ಪಾಟೀಲ್ ಹಲಗೇರಿ ಅವರನ್ನು ಶಾಲು, ಹಾರ, ಫಲಕ ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ಸಂಘಟನೆಗಳ ಪದಾಧಿಕಾರಿಗಳು, ಶಿಕ್ಷಕರು, ಸಾರ್ವಜನಿಕರು, ಅಭಿಮಾನಿಗಳು ಶುಭ ಹಾರೈಸಿದರು.
